ಬರ-ಪರಿಹಾರ: 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ
(ಬರ-ಪರಿಹಾರ:) 2023-24ನೇ ಸಾಲಿನಲ್ಲಿ ಅತಿ ಹೆಚ್ಚು ರೈತರಿಗೆ ಬರ ಪರಿಹಾರ ನೀಡಲಾಗಿದೆ, ಹಿಂದಿನ ಯಾವುದೇ ವರ್ಷ ಅಥವಾ ಯಾವುದೇ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಸರ್ಕಾರವು ಅತಿ ಹೆಚ್ಚು ರೈತರಿಗೆ ಬರ ಪರಿಹಾರ ನೀಡಿದೆ.
ಹೌದು, ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷ ಸುಮಾರು 38,78,525 ರೈತರಿಗೆ ಬರ ಪರಿಹಾರ ನೀಡಲಾಗಿದೆ. ಈ ಹಿಂದೆ 23,42,667 ರೈತರಿಗೆ ಪರಿಹಾರ ನೀಡಿರುವುದು ದಾಖಲೆಯಾಗಿತ್ತು. ಅಲ್ಲದೆ ಕಳೆದ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ 14,41,049 ರೈತರಿಗೆ ನೀಡಿದ ಪರಿಹಾರ ದೊಡ್ಡ ಪ್ರಮಾಣದಲ್ಲಿತ್ತು. ಆದರೆ, ಯಾವುದೇ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ರೈತರಿಗೆ ಬರ ಪರಿಹಾರ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.ಅಲ್ಲದೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಎಪಿಪಿ ಮೂಲಕ ಬೆಳೆ ಸಮೀಕ್ಷೆ ನಡೆಸಿದರು. ಸಮೀಕ್ಷೆ ನಡೆಸಿ ಬರ ಪರಿಹಾರದ ಹಣವನ್ನು ನೇರವಾಗಿ ಡಿಜಿಟಲ್ ಮೂಲಕ ರೈತರ ಖಾತೆಗೆ ಜಮಾ ಮಾಡಲಾಗಿದೆ. ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ ಎಲ್ಲ ರೈತರಿಗೆ ಪರಿಹಾರ ನೀಡಲಾಗಿದೆ. ನೀರಾವರಿ ಆಶ್ರಿತ ಜಮೀನಾಗಿದ್ದರೆ ಕಾಲುವೆಯಲ್ಲಿ ನೀರು ಸಿಗದ ರೈತರಿಗೂ ಪರಿಹಾರ ನೀಡಿದ್ದೇವೆ. ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಿಗೂ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರೈತರ ಜೀವನಾಧಾರಕ್ಕೆ ನಷ್ಟ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ 17,80,000 ರೈತ ಕುಟುಂಬಗಳನ್ನು ಗುರುತಿಸಲಾಗಿದ್ದು, ಜೀವನೋಪಾಯದ ನಷ್ಟಕ್ಕೆ ಪರಿಹಾರ ನೀಡುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ 517 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಬರ ಪರಿಹಾರ ಕಾಮಗಾರಿಗಾಗಿ ರೈತರಿಗೆ ಇದುವರೆಗೆ 4047 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಅಥವಾ ಪ್ರಗತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.