ರಾಜಸ್ಥಾನದಿಂದ ಕುರಿ ಮಾಂಸ: ದಿನೇಶ್ ಗುಂಡೂರಾವ್
ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಜಸ್ಥಾನದ ಕುರಿ ಮಾಂಸಕ್ಕೆ ನಾಯಿ ಮಾಂಸ ಬೆರೆಸಿದ ಪ್ರಕರಣದ ಲ್ಯಾಬ್ ವರದಿ ಮಟನ್ ಎಂದು ವರದಿಯಲ್ಲಿ ದೃಢಪಟ್ಟಿದೆ. ಅಲ್ಲದೆ, ಈ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು X ನಲ್ಲಿ ಹಂಚಿಕೊಂಡಿದ್ದಾರೆ.
ಮಾಂಸದ ಮಾದರಿ ಪರೀಕ್ಷಾ ವರದಿಯನ್ನು ಆಹಾರ ಇಲಾಖೆ ಪ್ರಕಟಿಸಿದ್ದು, ಅದು ನಾಯಿ ಮಾಂಸವಲ್ಲ ಶಿರೋಹಿ ಕುರಿ ಮಾಂಸ ಎಂದು ತಿಳಿದುಬಂದಿದೆ. ಎಸ್ ಓವಿಸ್ ಏರಿಯಾಸ್ (ಕುರಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಕುರಿಯ ವೈಜ್ಞಾನಿಕ ಹೆಸರು. ಹೀಗಾಗಿ ಬೆಂಗಳೂರು ನಿವಾಸಿಗಳು ನಿರಾಳವಾಗಿ ವಿಶ್ರಾಂತಿ ಪಡೆಯಬಹುದು. ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬೇಡಿ. ಇದು ಕುರಿ ಮಾಂಸ ಎಂದು ಅಧಿಕೃತವಾಗಿ ದೃಢಪಟ್ಟಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯುವಲ್ಲಿ ನಿಮ್ಮ ಸಹಕಾರ ಅತ್ಯಗತ್ಯ ಎಂದು ದಿನೇಶ್ ಗುಂಡೂರಾವ್ ಎಕ್ಸ್ ನಲ್ಲಿ ಹೇಳಿದ್ದಾರೆ.
ಆಹಾರ ಇಲಾಖೆ ಸ್ಪಷ್ಟನೆ: ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನಲ್ಲಿ ಕುರಿ ಮಾಂಸ ಹಾಗೂ ಇತರೆ ಪ್ರಾಣಿಗಳ ಮಾಂಸ ಸಾಗಣೆಯಾಗುತ್ತಿದೆ ಎಂಬ ಇತ್ತೀಚೆಗಷ್ಟೇ ಮೂಡಿದ್ದ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಷವಾಗಿ ತನಿಖೆ ನಡೆಸಲಾಗಿತ್ತು. ಹೈದರಾಬಾದ್‌ನಲ್ಲಿರುವ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೀಟ್ ರಿಸರ್ಚ್‌ಗೆ ಒಟ್ಟು 84 ಪಾರ್ಸೆಲ್‌ಗಳನ್ನು ಕಳುಹಿಸಲಾಗಿದೆ. ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸ್ಪಷ್ಟನೆ ನೀಡಿದ್ದು, ವರದಿಯಲ್ಲಿ ಕುರಿ ಮಾಂಸ ಎಂದು ದೃಢಪಟ್ಟಿದೆ.
ಏನಿದು ಪ್ರಕರಣ?: ಜುಲೈ 26ರಂದು ರಾಜಸ್ಥಾನದ ಜೈಪುರದಿಂದ ಲೋಡ್ ಮಾಡಿಕೊಂಡು ಬಂದಿದ್ದ ಬಾಕ್ಸ್‌ಗಳನ್ನು ಮೆಜೆಸ್ಟಿಕ್‌ನಲ್ಲಿ ಇಳಿಸಲಾಗಿತ್ತು. ಈ ವೇಳೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ತಂಡ ದಾಳಿ ನಡೆಸಿತು. ಬಾಕ್ಸ್ ಗಳಲ್ಲಿ ಕುರಿ ಮಾಂಸದೊಂದಿಗೆ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇವುಗಳನ್ನು ತರುತ್ತಿದ್ದ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದ ನಡೆದಿದೆ. ಬಳಿಕ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.